Monday, 9 April 2018

ಛತ್ರಿ - ಪ್ರೀತಿ


ಅಂದು ಶನಿವಾರ!! ಬೆಳಗ್ಗೆ ಎದ್ದು ಸ್ನಾನ ಮಾಡಿ ಯೂನಿಫಾರಂ ಐರನ್ ಮಾಡಿ ಹಾಕಿಕೊಂಡು,, ಹಿಂದಿನ ದಿನವೇ ತೊಳೆದಿಟ್ಟ ಬಿಳಿ ಶೂ ಹಾಕಿ ರೆಡಿಯಾಗಿ ಬ್ಯಾಗನ್ನು ಹೆಗಲ ಮೇಲೆ ಹಾಕಿಕೊಂಡು....  ಒಂದು ಕೈಯಲ್ಲಿ ಬ್ರೆಡ್ ಹಿಡಿದು ಮನೆಯಿಂದ ಹೊರಟರೆ ಶಾಲೆ ತಲುಪುವವರೆಗೆ ತಿನ್ನುವುದೇ ಕೆಲಸವಾಗಿತ್ತು....

              ಬೆಳಗಿನ ಜಾವದ ಬೆಚ್ಚನೆಯ ಬಿಸಿಲು!! ಮಂಪರಿನ ಮನಸ್ಸು!! ಅಲ್ಲಲ್ಲಿ ಮಂಜು,, ನಡೆದು ಹೋಗುವ ದಾರಿಯಲ್ಲಿ ಸುಂದರ ಮರಗಳಿಂದ ಬೀಳುವ ಗುಲ್ ಮೋಹರ್ ಹೂಗಳು!! ನಾನು ನಡೆವಾಗ ಅದೊಂದು ರೀತಿಯಲ್ಲಿ ನಾ ದೇವತೆಯೆನೋ ನನಗಾಗಿಯೇ ಈ ಹೂಗಳ ರಾಶಿ ಚೆಲ್ಲಿರುವರೇನೊ ಎಂಬಂತೆ....  ಒಳಗೊಳಗೇ ಏನೇನೋ ಆಸೆಗಳು ಹೀಗೆ ಅದೊಂದು ದಿನ ನಡೆವಾಗ ಬೆನ್ನ ಹಿಂದೆ ಒಂದು ಧ್ವನಿ ಕೇಳಿಸಿತು!!

ನನಗಿಲ್ವಾ!!

ತಕ್ಷಣವೇ ಗಾಬರಿಯಲ್ಲಿ ತಿರುಗಿದೆ ನಾನು...

ಇವನಾ... 10ನೇ ಕ್ಲಾಸ್  "ಬಿ" ಸೆಕ್ಷನ್   ಹುಡುಗ....


ಮತ್ತೊಮ್ಮೆ ಸನಿಹದಲ್ಲೇ ಕೇಳಿದಂತಾಯಿತು!! ನಾ ತಲೆ ಎತ್ತಲೇ ಇಲ್ಲಾ...

 ಅವನ ನಡಿಗೆ ಮಾತ್ರ ಜೋರಾಗಿ ನನಗಿಂತಲೂ ಮುಂದೆ ಸಾಗಿ ಹೋಗಿಯೇ ಬಿಟ್ಟಾ...

 ನಾನು ಮತ್ತೆ ತಿನ್ನದೇ  ಕವರ್ ನಲ್ಲಿ ಬ್ರೆಡ್ ಹಿಟ್ಟು ಗಂಟು ಹಾಕಿ,, ಬ್ಯಾಗಿನಲ್ಲಿ ಇಟ್ಟು ಬಿಟ್ಟೆ....

ಶಾಲೆಗೆ ಬಂದ ಮೇಲೆ ಕ್ಲಾಸ್ ರೂಮ್ಗೆ ಹೋಗಿ ಬ್ಯಾಗ್ ಇಟ್ಟು.. ಹೊರಗೆ ಬಂದು ಸೀಬೆಕಾಯಿ ಮರದ ಕೆಳಗೆ ಕುಳಿತು ಅವನನ್ನೇ ಸುತ್ತೆಲ್ಲ ಕಡೆ ಹುಡುಕಿದೆ!! ಎಲ್ಲೂ ಅವನು ಕಾಣಲೇ ಇಲ್ಲ ..

ಬೇಜಾರಿನಲ್ಲಿ ತಲೆತಗ್ಗಿಸಿದೆ ಮತ್ತದೇ ಧ್ವನಿ..

ಯಾಕೋ ತಿನ್ನಲಿಲ್ಲ!! ನಾನು ಕೇಳಿದೆ ಅಂತ ನಾ ಸಾರಿ!!

 ಎಂದು ಕೇಳಿದಾ ಕ್ಷಣ ತಿರುಗಿ ನೋಡಿದರೆ ನಾನು...
ಅದನ್ನು ನನಗೆ ಕೇಳಿಸುವ ಹಾಗೆ ಅವನ ಗೆಳೆಯನಿಗೆ ಹೇಳಿಕೊಂಡು ಅವನ ಕ್ಲಾಸ್ ರೂಮಿನ ಕಡೆ ಹೆಜ್ಜೆ ಇಟ್ಟ ...

ಅಂದಿನಿಂದ ಕಣ್ಣಿನಲ್ಲಿಯೇ ನಮ್ಮಿಬ್ಬರ ಪರಿಚಯವಾಗಿ ಮಾತು ಕೂಡ ಶುರುವಾಯಿತು...
ನಾನು ಶಾಲೆಗೆ ಬಂದಾಕ್ಷಣ ಅವನಿಗಾಗಿ ಕಾಯುತ್ತಿದ್ದೆ ಅವನು ಬಂದರೆ ಬೇಗ ನನಗಾಗಿ ಕಾಯುತ್ತಿದ್ದ ಕಾಯುವುದು ನಮ್ಮಿಬ್ಬರಿಗೆ ಎಂದೂ ಬೇಸರ ತರಿಸಿರಲಿಲ್ಲ...

ಅವನೊಂದು ಮೂಲೆಯಲ್ಲಿ  ಫ್ರೆಂಡ್ಸ್ ಜೊತೆ ಕುಳಿತರೆ ನಾನು  ನನ್ನ ಕ್ಲಾಸ್ ರೂಮಿನ ಸಮೀಪದ ಸೀಬೆ ಮರದ ಕೆಳಗೆ ಕೆಳಗೆ ಕುಳಿತುಕೊಳ್ಳುತ್ತಿದ್ದೆ ನನ್ನ ಗೆಳತಿಯರ ಜೊತೆಗೆ.. ನಮ್ಮಿಬ್ಬರ ಕೈ ಸನ್ನೆ ಗಳಲ್ಲಿ ಅದೆಷ್ಟೋ ಮಾತುಗಳು ನಡೆಯುತ್ತಿತ್ತು ಅದು ಯಾರಿಗು ಗೊತ್ತಾಗದಂತೆ  ಎಂದರೆ ಅದು ಈಗಿನ ವಾಟ್ಸಪ್ ಚಾಟ್ ಗಿಂತಲೂ ಫಾಸ್ಟ್ !!!! ಅನ್ನಬಹುದು ನಿಜ..

 ಹಾಯ್ ಅನ್ನೋದರಿಂದ ಹಿಡಿದು ತಿಂಡಿ ಏನು?? ಅಂತ ಕೇಳುವುದಲ್ಲದೆ ಪುಳಿಯೋಗರೆ" ಅಂತ ಕೂಡ ಸನ್ನೆಯಲ್ಲಿಯೇ ಹೇಳಿ ಅರ್ಥ ಮಾಡಿಕೊಳ್ಳುತ್ತಾ ಇದ್ವೀ.. 

ನೋವು,, ಅಳು,, ಸಂತೋಷ ಎಲ್ಲವೂ ದೂರದಿಂದಲೇ ಒಬ್ಬರಿಗೊಬ್ಬರಿಗೆ ತಿಳಿಯುತ್ತಿತ್ತು,, ಬೇಜಾರಿನಲ್ಲಿದ್ದರೆ ಅರೆ ಕ್ಷಣದಲ್ಲಿಯೇ ನನ್ನ ನಗಿಸುವ ಕಲೆ ಬಹುಶಃ ಅವನಿಗೆ ಮಾತ್ರ ತಿಳಿದಿತ್ತು ಅನಿಸುತ್ತದೆ....

 ಅದೊಂದು ದಿನ ಮಳೆ!! ಶಾಲೆ ಬಿಟ್ಟರು...
ನಾವೆಲ್ಲರೂ ಮಳೆ ನಿಲ್ಲೋದನ್ನೇ ಕಾಯುತ್ತಾ ನಿಂತಿದ್ದ ಕ್ಷಣ"..

ಎಷ್ಟು ಕಾದರೂ ಮಳೆ ನಿಲ್ತಾನೆ ಇರಲಿಲ್ಲ ಫ್ರೆಂಡ್ಸ್ ಎಲ್ಲರು ಹಾಗೋ ಹೀಗೋ ಹೋದ್ರು... 
ನಾನು ಶಾಲೆಯ ಗೇಟಿನ ಬಳಿ ನಿಂತಿದ್ದೆ ಹೋಗಲಾ!! ಬೇಡ್ವಾ!!! ಇನ್ನು ಸ್ವಲ್ಪ ಹೊತ್ತು ಕಾದರೆ ಮಳೆ ನಿಲ್ಲುತ್ತಾ? ಅನ್ನೋ ಪ್ರಶ್ನೆಗಳ ನನಗೆ ನಾನೇ ಕೇಳಿಕೊಳ್ಳುತ್ತಾ...

ಅಷ್ಟರಲ್ಲಿ ಅವನ ಧ್ವನಿ
ಮೊದಲ ಬಾರಿಗೆ ನೇರವಾಗಿ ಕಣ್ಣ ಮುಂದೆ ಪ್ರತಿಧ್ವನಿಸಿತ್ತು...


 ರೀ!!! ತಗೋಳಿ ಛತ್ರಿ  ಹೋಗಿ ಬೇಗ ಮನೆಗೆ....

 ನಾನು ಬೇಡವೆನ್ನುವುದರ ಒಳಗೆ ಅದಾಗಲೇ ಛತ್ರಿ ನನ್ನ ಕೈಯಲ್ಲಿತ್ತು... ಅವನು ಮತ್ತೆ  ಕಾಣಿಸಲೇ ಇಲ್ಲ....

 ಅಂದು ಆ ಛತ್ರಿಯ ಮೇಲೆ ಬೆಟ್ಟದಷ್ಟು ಪ್ರೀತಿ ಆಗಿತ್ತು...

ಅದರ ಬಣ್ಣ!! ಹಿಡಿಕೆ!! ಪ್ರತಿಯೊಂದನ್ನು ಮೆಚ್ಚಿ ಹೊಗಳಿದ್ದೇ ಹೊಗಳಿದ್ದು ನಾನು... 
ಮನೆಯಲ್ಲಿ ಛತ್ರಿ ಗೆಳತಿ ಕೊಟ್ಟಳೆಂದು ಹೇಳಿ ಅದನ್ನು  ಎಳೆ ಎಳೆಎಳೆಯಾಗಿ ಸೇರಿಸಿ ಅದನ್ನು  ಜೋಪಾನ ಮಾಡಿದ್ದು ಆಯ್ತು....

ಆದರೆ ರಾತ್ರಿ ಎಲ್ಲಾ ಒಂದೇ ಯೋಚನೆ ನನಗೆ...  ಅದನ್ನು  ಹಿಂತಿರುಗಿಸುವುದು ಹೇಗೆ? ಗೊತ್ತೇ ಆಗಲಿಲ್ಲ... ಅಕಸ್ಮಾತ್ ಅದು ಅವನದೇ ಅಂತ ಯಾರಿಗಾದರೂ ಗೊತ್ತಾದರೆ  ಅಯ್ಯೋ ಕಥೆ ಮುಗೀತು ನಂದು...  
ಇನ್ನು ಕೊಡುವುದು ಹೇಗೆ ದೇವರೇ ನೀನೆ ದಾರಿ ತೋರಿಸು ಎಂದುಕೊಂಡು.. ಧೈರ್ಯ ಸಾಲದೇ  ಮನೆಯಲ್ಲಿಯೇ  ಛತ್ರಿಯಿಟ್ಟು ಬಂದುಬಿಟ್ಟೆ ಶಾಲೆಗೆ...

 ನನಗಿಂತಲೂ ಮೊದಲೇ ಅವನಾಗಲೇ ಬಂದು ಕುಳಿತಾಗಿತ್ತು ನಾನು ಮತ್ತದೇ ಸೀಬೆ ಮರದ ಕೆಳಗೆ ಕೂತು ಮೊದಲ ಸನ್ನೆ ಮಾಡಿದ್ದೇ ನನ್ನೆರಡು ಕೈಗಳನ್ನು ಕುಲುಕಿ ಥ್ಯಾಂಕ್ಸ್ ಹೇಳಿದ್ದು!! ಅವನು ನಗುತ್ತಾ ಕತ್ತಾಡಿಸಿದ್ದು...

ಅವನ ಪ್ರತಿ ಸನ್ನೆಯ ಮೊದಲ ಪ್ರಶ್ನೆ!!  ಕೈಯಲ್ಲಿ ಮುಷ್ಟಿ ಹಿಡಿದು ಮೇಲೆ ತೋರಿಸಿ ಛತ್ರಿ ಎಲ್ಲಿ?? ಎಂದು!!

 ನಾನು ತಂದಿಲ್ಲ ಎಂದು  ತಲೆಯಾಡಿಸಿದೆ ನಗುವಿನಲ್ಲಿ....

ಅವನು ತಲೆಯ ಮೇಲೆ ಕೈ ಹೊತ್ತು ಕೊಂಡು ಅದು ನನ್ನದಲ್ಲ  ನನ್ನ ಫ್ರೆಂಡ್ದು..

 ಎಂದಿದ್ದನ್ನು ಕಂಡು ನಾನು  ನಕ್ಕು ತಂದು ಕೊಡಲ್ಲ ಎಂದೇ...

 ಅವನು ಕೈ ಮುಗಿಯುತ್ತಾ ಪ್ಲೀಸ್ ಪ್ಲೀಸ್ !!! ಹಾಗೆ ಮಾಡ ಬೇಡ  ಎಂದು ಬೇಡಿಕೊಂಡಿದ್ದು ನನಗೆ ಈಗಲೂ ಕಣ್ಣ ಮುಂದೆ ಆಗಾಗ ಬರುತ್ತಲೇ ಇರುತ್ತದೆ...

ಶಾಲಾ ದಿನಗಳು ಮುಗಿಯಿತು.. 
ನಾವು ಬೇರೆ ಊರಿಗೆ ಬಂದೆವು... 
ಈಗ ಅವನೆಲ್ಲಿದ್ದಾನೆ ಹೇಗಿದ್ದಾನೆ ಒಂದು ತಿಳಿದಿಲ್ಲ...

ಆದರೆ  ಅವನಂದು ಕೊಟ್ಟ ಛತ್ರಿ ಇಂದಿಗೂ ಬಿಸಿಲ್ಲಲ್ಲಿ,,,  ಮಳೆಯಲ್ಲಿ ನನ್ನ ಜೊತೆಗಿದೆ..

ಅವನು ನಾನು ಎಂದು ಜೊತೆ ಜೊತೆಯಾಗಿ ಕೂತು ಮಾತನಾಡಲಿಲ್ಲ,, 
ಎಂದೂ ಐ ಲೈಕ್ ಯು!!! 
ಐ ಲವ್ ಯು !!! ಎನ್ನಲಿಲ್ಲ...

 ಆದರೂ ಅದೆಷ್ಟು ಮಾತುಗಳು... ಅದೆಷ್ಟೋ ತರಲೆಗಳು.. ನಗು ಪ್ರೀತಿ ಎಲ್ಲವೂ ದೂರದಿಂದಲೇ ನಮ್ಮಿಬ್ಬರಲ್ಲಿ  ಸಮಾಗಮವಾಗಿತ್ತು..

ದೂರದಿಂದ ಬೆಳೆದ ಪ್ರೀತಿ ದೂರಾಗಲಿಲ್ಲ ಎಂದೂ, ದೂರದಿರು ನೀ! ನನ್ನ!!!!! 
ನಾ ಛತ್ರಿಯ ಹಿಂತಿರುಗಿಸಲಿಲ್ಲವೆಂದು....

   ‌           ದಿವ್ಯ ಭರತ್...