Saturday, 17 February 2018

ಹಲಸುವಿಲ್ಲದ ಮನಸು...


ನನ್ನ ಮದುವೆ ಗೆ ಇನ್ನೂ ಒಂದು ವಾರವಷ್ಟೆ, ಅದನ್ನು ನೆನೆಪಿಸಿಕೊಂಡರೆ ಅಳು   ಉಮ್ಮಳಿಸಿ ಬರುತ್ತದೆ. ಇದು ನನ್ನ ಮನೆ ನಾ ಆಡಿ ಬೆಳೆದ ಮನೆ, ಪ್ರತಿ ಜಾಗವು ನನ್ನದು, ಇಲ್ಲಿರುವ ಪ್ರತಿಯೊಬ್ಬರು ನನ್ನವರು ಇವರಿಲ್ಲದೆ ಇವರನ್ನು ಬಿಟ್ಟು ಹೇಗಿರಲಿ ಎಂಬ ವಾಸ್ತವ ಬದುಕ ಭಾರವಾಗಿಸುತ್ತಿತ್ತು....

ಅಜ್ಜಿ, ತಾತ, ಅಮ್ಮ, ಅಪ್ಪ ಎಲ್ಲರೂ ನಾನು ಚಿಕ್ಕವಳಿದ್ದಾಗ ," ಹೆಣ್ಣು ಮಕ್ಕಳು ಮದುವೆ ಆಗಲೇ ಬೇಕು, ಹುಟ್ಟಿದ ಮನೆಯ ತೊರೆಯಲೇ ಬೇಕು" ಎಂದಾಗಲೆಲ್ಲಾ, ನಾನು ಜೋರಾಗಿ ಅಳುತ್ತಾ ಓಡಿ ಹೋಗಿ ಕೊಟ್ಟಿಗೆಯಲ್ಲಿ ನಿಲ್ಲುತ್ತಿದ್ದೆ,, ಆಗ ಅಪ್ಪ ಬಂದು ನನ್ನ ಎತ್ತಿ ಮುದ್ದಾಡಿ ಅಯ್ಯೊ! ನಮ್ಮ ಮನೆಯ ಲಕ್ಷ್ಮೀ ಇವಳು, ಯಾರಾವರು ಬರಲಿ ನಿನ್ನ ಕರೆದುಕೊಂಡು ಹೋಗುವವರು ಎನ್ನುತ್ತಾ ಸಮಾಧಾನಿಸಿ ತಾತನ ಬಳಿ ಬಿಟ್ಟಾಗ ನನ್ನವ್ವ ನೀನು ನಿನ್ನ ಬಿಟ್ಟು ಕೊಟ್ಟೇವ 'ಕೂಸೇ 'ಎಂದು ಮುದ್ದಾಡುತಿದ್ದವರು ಇಂದು ನಾ ಹೋಗಲಾರೆ ಎಂದು ಅತ್ತರೆ ಹುಚ್ಚು ಹುಡುಗಿ ಎಂದು ಸಮಾಧಾನಿಸುತ್ತಾರೋ ಹೊರತು ಕಳಿಸೆವು ಎನ್ನುವುದಿಲ್ಲಾ.....

ಒಂದು ವಾರದಿಂದ ಮನೆಯ ತುಂಬೆಲ್ಲಾ ನೆಂಟರು, ಅಮ್ಮ ಹೊರಗೆಲ್ಲೂ ಕಳಿಸುತ್ತಲೇ ಇಲ್ಲ,, ಮದುವೆಯ ಹುಡುಗಿ ಮನೆಯಿಂದ ಹೊರಗೆ ಹೋಗ ಬಾರದೆನ್ನುತ್ತಿದ್ದಾಳೆ.... ನನಗೆ ನನ್ನ ಹಲಸಿನ ಮರದ ನೆನಪಾಗುತ್ತಿದೆ, ಅವಳನ್ನು ನಾನು "ಹಲಸು " ಎಂದೇ ಕರೆಯುವುದು, ಅವಳನ್ನು ನೋಡಿ ವಾರವಾಯಿತೆಂದು ನೆನೆದು ಅಮ್ಮ ನ ಬಳಿ ಬಂದೆ...

ಅಮ್ಮ ನೆಂಟರಿಗಾಗಿ ಅಡಿಗೆಯ ತಯಾರಿಯಲ್ಲಿದ್ದಳು,, ಬಂದವಳೆ ನಾನು !! ನಿನಗೆಷ್ಟು ಸಂಭ್ರಮ ಅಲ್ಲವಾ ಎಂದೆ .. ಅವಳು ನನ್ನ ದೃಷ್ಟಿ ತೆಗೆದು ನಕ್ಕು... ಏನು ಬೇಕೆಂದಳು?? ನಾನು ತೋಟಕ್ಕೆ ಹೋಗಬೇಕು 'ಹಲಸು'ನ ನೋಡಬೇಕು ಹೋಗ್ತೀನಿ ಅಂದೆ... ಒಮ್ಮೆಲೆ ಸಿಟ್ಟಾದಳು ಯಾವ ತೋಟ? ಯಾವ ಹಲಸು? ಇನ್ನೂ ಅದೇ ಹುಡುಗಾಟಿಕೆ ಅಂದಳು... ನಾನು ಜೋರಾಗಿ ಕಿರುಚಿದೆ " ನಿನಗೇನು ಪ್ರೀತಿಯಿಲ್ಲ, ನನ್ನ ನೋಡದಯೇ ಇರಬಲ್ಲೇ, ಆದರೆ ನನ್ನ ಹಲಸು ಆಗಲ್ಲ, ಅವಳು ಇರಲಾರಳು ಎಂದೇ.. ಅಮ್ಮನ ಕಣ್ಣಲ್ಲಿ ನೀರಾಡಿತು, ಸೆರಗಲ್ಲಿ ಕಣ್ಣನು ಒತ್ತಿ ಹಿಡಿದು, " ನೀ ಬೆಳೆಸಿದ ಮರವೇ ನಿನ್ನ ಬಿಟ್ಟಿರಲಾರದು ಎನ್ನುವೆಯಲ್ಲಾ, ನಾ ಹೆತ್ತು ಬೆಳೆಸಿದ ಕೂಸ ನಾ ಬಿಟ್ಟಿರುವೆನೆಂದು ನೀ ಹೇಗೆ ಅಂದುಕೊಂಡೆ, ಮರದ ಪ್ರೀತಿ ಗೊತ್ತಾಯ್ತು ಅಮ್ಮನ ಪ್ರೀತಿಗಿಂತ ಅಂದಳು,!!!!! ನಂಗೆ ಅದೆಲ್ಲಾ  ಗೊತ್ತಿಲ್ಲ ನಾ ಹೋಗ್ತೀನಿ ಅಂದೆ....


ತಡಿಯೇ ಶ್ಯಾಮ್ ನ ಕರೆದುಕೊಂಡು ಹೋಗು, ಅಪ್ಪ ಬರುವುದರೂಳಗೆ ಬಂದು ಬಿಡು, ತಗೋ ಕೊಡೆ ಮಳೆ ಬರೋಂಗಿದೆ ಎಂದಳು.. ಶ್ಯಾಮ್ ನ ಕೈ ಹಿಡಿದು ಮನೆಯಿಂದ ಸ್ವಲ್ಪ ದೂರಕ್ಕೆ ಬಂದಾಕ್ಷಣ ಮಳೆ ಜೋರಾಯಿತು, ಶ್ಯಾಮ್ ಹೆದರಿ ಮನೆಗೆ ಓಡಿದ, ಕೊಡೆ ಇಡಿದು  ಹಲಸು ನ ನೋಡಲೇಬೇಕೆಂದು ಹೊರಟೆ...

ಸುತ್ತಲೂ ಹಸಿರು!!!

ಬಾಳೆ! ತೆಂಗು, ಅಡಿಕೆ ತೋಟ.. ನಾ ನೆಟ್ಟ ಮಲ್ಲಿಗೆ, ಜಾಜಿ ಹೂವಿನ ಗಿಡಗಳ ಕಂಪು, ಹೇಗಿರಲಿ ಬಿಟ್ಟು ಎಂದುಕೊಂಡೆ.... ದಾಕ್ಷಾಯಿಣಿ ಒಬ್ಬಳೇ ಮಳೆಯ ಲ್ಲಿ ನೆನೆಯುತ್ತಿದ್ದಳು, ದಾಕ್ಷಾಯಿಣಿ!! ನಮ್ಮ ಮನೆಯ ಹಸು ಗೌರಿಯ ಕರು ಅವಳಿಗೆ ಅಪ್ಪನಿಟ್ಟ ಹೆಸರು.... ಇವಳನ್ನು ಇಲ್ಲಿ ಬಿಟ್ಟು ನಮ್ಮ ಮನೆಯ ಕೆಲಸದ ರಂಗನೆಲ್ಲಿ ಹೋದ ಎಂದು ಹುಡುಕಿದೆ ಕಾಣಲ್ಲಿಲ್ಲಾ.. ಅವಳನ್ನು ಕೈಯಲ್ಲಿ ಹಿಡಿದು ಹಲಸು ಬಳಿ ಬಂದೆ...

ಹಲಸು! ಕ್ಷಮಿಸು ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ ಮದುವೆಯಾಗಿ, ಇನ್ನೂ ಒಂದು ವಾರವಷ್ಟೇ.. ನನಗೂ ನಿನ್ನ ಬಿಟ್ಟು ಇರಲಾಗುವುದಿಲ್ಲ ಆದರೆ ಏನು ಮಾಡಲಿ ಹೇಳು ಎಂದು ಅತ್ತು ಬಿಟ್ಟೆ,, ಮರದ ಮೇಲಿಂದ ಹನಿಯೋಂದು ಕೈ ಮೇಲೆ ಬಿತ್ತು, ಅದು ಮಳೆಯ ಹನಿಯಾ? ಹಲಸುಳ  ಕಣ್ಣೀರಾ ತಿಳಿಯಲಿಲ್ಲಾ..
ಅಪ್ಪ ಅಡಿಕೆ,ಕಾಯಿ ಕೀಳಿಸುವಾಗ ಇವಳ ನೆರಳಲ್ಲಿ ಮಲಗುತ್ತಿದ್ದೆ, ಅಮ್ಮನೊಂದಿಗೆ ಬಂದಾಗ ಆಟ, ಪಾಠವೆಲ್ಲವೂ ಇಲ್ಲಿಯೇ..ಅಪ್ಪ ಗದರಿದಾಗ ಅಮ್ಮನೊಂದಿಗೆ  ನಾ ಮುನಿಸಿಕೊಂಡಾಗ ಇವಳ ಬಳಿ ಬಂದು ವರದಿ ಒಪ್ಪಿಸುವವರೆಗೂ ಸಮಾಧಾನವಿರುತ್ತಿರಲಿಲ್ಲಾ!!
 ಅಲ್ಲಿ ಏನು ಮಾಡಲಿ ಎಂದು ಕಣ್ಣೀರಾಕಿದೆ ದಾಕ್ಷಾಯಿಣಿ ಅಂಬಾ!!!! ಎಂದಾಗ, ಅಮ್ಮನ ನೆನಪಾಯಿತು.. ಅವಳು ಗಾಬರಿಯಾಗಿರುತ್ತಾಳೆ ನಾನು  ಹೊರಡ ಬೇಕೆಂದು, " ಹಲಸುಗೆ ಮುತ್ತು ಕೊಟ್ಟು, ಮಾತು ಕೊಟ್ಟೆ, ಅವಳಿಗಾಗಿ ಆಗಾಗ್ಗೆ ಊರಿಗೆ ಬರುವೆನೆಂದೇಳಿದೆ... ಜೋರು ಮಳೆಯಲ್ಲಿ ಬಂದವಳು ತುಂತುರು ಹನಿಯ ನಡುವೆ ಮನೆಗೆ ಹಿಂತಿರುಗಿದೆ, ಹಚ್ಚ ಹಸುರಿನ ನೆನಪುಗಳ ಮೂಟೆಯನ್ನೊತ್ತು...
 
      ‌‌‌                                  ದಿವ್ಯಭರತ್....

2 comments:

  1. very touching.you are blessed with lucid writing.congratulations.

    ReplyDelete
  2. Oh ⚘⚘... Thank u so much sir..

    ReplyDelete