Tuesday, 27 March 2018

ನನ್ನಮ್ಮ ಅವಳೊಂದು ಪ್ರಕೃತಿ..


ನನಗಾಗ 4 ವರುಷ.. ಇದ್ದಕ್ಕಿದ್ದಂತೆ ಒಂದು ದಿನ ಜೋರು ಮಳೆ ಗುಡುಗಿನ ಶಬ್ಧ !!

ನಾನು ಜೋರಾಗಿ ಚೀರುತ್ತಾ

​"​ಅಮ್ಮಾ​.. ​ಅಮ್ಮಾ​... "​
ಎಂದು ಕೋಣೆಯಿಂದ ಓಡಿದೆ..

ಹಪ್ಪಳ, ಸಂಡಿಗೆ ತುಂಬಿದ ಡಬ್ಬಗಳ ಹಿಡಿದು ತಾರಸಿಯಿಂದ ಇಳಿದು ಬಂದಳು ನನ್ನ ಕೂಗಿಗೆ ಹೆದರಿ..​!​

ನಾನು ಅಳುತ್ತಾ ಹಜಾರದ ಕಂಬವಿಡಿದು ನಿಂತಿದ್ದನ್ನು ಕಂಡು ಅಲ್ಲಿಯೇ ಕುಳಿತುಕೊಂಡು ಸೆರಗಿನಲ್ಲಿ ಕಣ್ಣೀರ ಒರೆಸುತ್ತಾ ಸಮಾಧಾನಿಸಿ ಏನಾಯಿತೆಂದಳು??


ನಾನು

​"​ಮಳೆ​..ಮಳೆ​.. ಎಂದೆ...

ಅವಳು ​"​ಓ ಮಳೇ​... "​
ಎಂದು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..

ನಾನು ಮಿಂಚಿಗೆ ಹೆದರಿ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡೆ....

ನನ್ನಮ್ಮನ ಕೈ ಬಳೆಗಳ ಶಬ್ಧದಲ್ಲಿ ,,, ಕಾಲ್ಗೆಜ್ಜೆಯ ಘಲು ಘಲುವಿನಲ್ಲಿ,, ಮುಡಿದ ಮಲ್ಲಿಗೆಯ ಕಂಪಿನಲ್ಲಿ ಇದೆಲ್ಲಕ್ಕಿಂತಲೂ ಮಿಗಿಲಾಗಿ ಅವಳ ಸೀರೆಯ ಸೆರಗ ಅಂಚಿನಲ್ಲಿ ಅದೆಂಥದೋ ಶಕ್ತಿ ಇರುತ್ತದೆ​.

ಏನೇ ಬಂದರೂ ಅವಳಿದ್ದಾಳೆ  ನನ್ನ ರಕ್ಷಿಸುತ್ತಾಳೆ ಎಂಬ ಭಾವ ಮೂಡಿಸುತ್ತದೆ....

ಸೆರಗ ಮುಚ್ಚಿ ಮಲಗಿದ ನನ್ನ ತನ್ನೆರಡು ಕೈಗಳಿಂದ ಬಾಚಿಕೊಂಡು
​"​ಕಂದಾ, ಈ ಮಳೆಗೆ ಹೆದರಿಕೆಯಾ ನಿನಗೆ​"​
ಎಂದಳು..


​"​ಹೂಂ​" ​ಎಂದೆ...

​"​ಅಯ್ಯೋ ಈ ಮಳೆಯೇ  ಸಕಲ ಜೀವ ರಾಶಿಗಳಿ​ಗೂ ಬದುಕಿನ ಚಿಲುಮೆ ಬಂಗಾರಿ.....  ಇದು ಪ್ರಕೃತಿಯ ಒಂದು ಭಾಗ ; ಇದರಿಂದಲೇ ನಾವು​"​ ಎಂದಳು...


​"​ಅದೇಗಮ್ಮಾ ನಾವು​...."

"ಬಂಗಾರಿ "ನೋಡು ಮಳೆರಾಯ ಬಂದ ಮೇಲೆ​ನೇ ನಾವು ಹೊಲ ಉಳುವುದು ಗೊತ್ತಾ...​!​
ನೀನು ನಾಟಿ ಮಾಡ್ತೀನಿ ಅಂದೆ ಅಲ್ವಾ ಮೊನ್ನೆ ...​"


​"ಹು  ನಾನು ನಾಟಿ ಮಾಡ್ತೀನಿ ಅಮ್ಮ ​ನಾನೂನೂ "

​"​ಸರಿ ಸರಿ
ಮಾಡುವೆ​ಯಂತೆ  ಆದ್ರೆ ಅದಕ್ಕೆ ಈ ಮಳೆ ಬರಬೇಕು ಮಳೆ ಬಂದರೇನೆ ನಾವು ಭತ್ತದ ಪೈರು ನಾಟಿ ಮಾಡೋಕೆ ಆಗೋದು.. ಅಷ್ಟೇ ಏಕೆ ನಾವು ಬಟ್ಟೆ ಒಗೆಯಲು ಹಳ್ಳಕ್ಕೆ ಹೋದಾಗ ಅವತ್ತು ಅಮ್ಮಾ ಆಟ ಆಡಲು ನೀರೆ ಇಲ್ಲಾ ಇಲ್ಲಿ ಎಂದೆಯಲ್ಲ... ಹಳ್ಳ - ಕೊಳ್ಳ ತುಂಬ ಬೇಕು ಅಂದ್ರೆ ಅದಕ್ಕೂ ಈ ಮಳೆ ಬರಬೇಕು..​"​

 "​ಹೂಂ  ಹೌದು​"​"

"ಈ ಮಳೆ ಬರದೇ ಹೋದರೆ ಬರಗಾಲ ಬರುತ್ತೋ ಬಂಗಾರಿ...​"


​"​ಬರಗಾಲ ಅಂದರೇನಮ್ಮಾ??? ​"


"​ಅಜ್ಜಿಗೆ ಯಾಕಮ್ಮ ಹೀಗೆ ಕಾಲೆಲ್ಲಾ ಒಡೆದಿದೆ ಎಂದು ಕೇಳಿದಾಗ ನಾನು ನಿನಗೆ ಏನೇಳಿದೆ​?"


"ಕೊಬ್ಬರಿ ಎಣ್ಣೆ ಹಚ್ಚಲು ಹೇಳಿದೆ ನಾನು ದಿನ ಅಜ್ಜಿ ಮಲಗಿದಾಗ ಹಚ್ಚುತ್ತೀನಿ ಅಲ್ವಾ ಅಮ್ಮಾ​"


"ಹೌದು ನನ್ನ ಬಂಗಾರಿ ಜಾಣೆ... ಅಜ್ಜಿ ಕಾಲಿನ ಹಾಗೆ
ಭೂತಾಯಿಯ​ಲ್ಲೂ
ಬಿರುಕು ಮೂಡುತ್ತದೆ ಕಂದಾ.. ಆಗ ಹಳ್ಳ ಕೊಳ್ಳ ದಲ್ಲಿ ನೀರು ಸಿಕ್ಕೋಲ್ಲ,, ನಾಟಿ ಮಾಡಕೆ ಆಗೋಲ್ಲ,, ನಮ್ಮ ನೆ ಹಸುಗಳು ಗೌರಿ, ದಾಕ್ಷಾಯಿಣಿ, ತುಂಗೆಗೆ ಮೇಯಲು ಮೇವು ಸಿಕ್ಕೋಲ್ಲಾ ಅದೇ ಬರಗಾಲ!!!...​"​



​"​ಹೌದಾ..  ​"

"ನನ್ನ  ಕಣ್ಣಿನಲ್ಲಿ ನೀರಿನ ಹನಿಗಳ ತುಂಬಿಕೊಂಡು
​"​

"ಅದು ಬರಲೇ ಬಾರದು ಅಲ್ವಾಮ್ಮಾ​"
ಎಂದು ಸೆರಗ ಸರಿಸಿ ಕೆನ್ನೆ ಮುಟ್ಟುತ್ತಾ ಕೇಳಿದೆ..


​"​ಹೌದು ಬಂಗಾರಿ ಬರಬಾರದು .... ಆದರೆ ಈ ಜಗತ್ತು ಪ್ರಕೃತಿಯ ಆಸ್ತಿ ಇಲ್ಲಿ ಯಾವಾಗ ಏನು ಆಗಬೇಕೋ  ಅದೇ ಆಗುವುದು... ನಾನಾಗಲಿ ನೀನಾಗಲಿ ಇದರಂತೆಯೇ ನಡೆಯಬೇಕು.. ಮಳೆಯಿಂದಲೇ ಬೆಳೆ,, ಬೆಳೆವವನೇ ರೈತ" ​

ಎಂದಾಗ ಮೆಲ್ಲಗೆ ಎದ್ದು ಕುಳಿತುಕೊಂಡೆ ನಾನು..


​"​ಅಮ್ಮ ಹಾಗಾದರೆ ಅಪ್ಪ ರೈತ ಅಲ್ವಾ ಅಮ್ಮಾ​!" ​
ಎಂದು  ಖುಷಿಯಿಂದ ಕೈಗಳಲ್ಲಿ ಚಪ್ಪಾಳೆಗಳ ತಟ್ಟಿದೆ....


​"​ಬಂಗಾರಿ ನಮ್ಮ ಎಷ್ಟೋ ನೋವುಗಳು ಸಂಕಟಗಳು ಈ ಮಳೆಯಿಂದಲೇ
ಕೊಚ್ಚಿಕೊಂಡು ಹೋಗುತ್ತವೆ​"​
ಎಂದು  ಹಜಾರದ ಮೆಟ್ಟಿಲಿಳಿದು ಮನೆಯ ತುಳಸಿ ಕಟ್ಟೆಯ ಪಕ್ಕದಲ್ಲಿ ನಿಂತು ಕೈಬೀಸಿ ಕರೆದಳು ನನ್ನಮ್ಮ ನನ್ನನ್ನು...

ಮೊದಲ ಬಾರಿ ಅಮ್ಮನ ಕೈಹಿಡಿದು ಮಳೆಯಲ್ಲಿ ನೆನೆದು ಆಡಿ ಕುಣಿದದ್ದು....


ನನ್ನಮ್ಮ ಅಂದು ನನ್ನ ಸಂತೈಸಿದ ರೀತಿ ಇಂದು ನಾನು ಪ್ರಕೃತಿಯ ಮತ್ತು ಬದುಕಿನ ಮೇಲೆ ಇಟ್ಟಿರುವ ನಂಬಿಕೆಗೆ​,
ಪ್ರೀತಿಗೆ ಕಾರಣ.. ಅವಳ ನಗು ಕೈ ಬಳೆ...ಕಾಲ್ಗೆಜ್ಜೆಯ ಶಬ್ಧ... ಒಂದೊಂದು ವಸ್ತುವಿ​ಗೂ,
ವಿಷಯಕ್ಕೂ
ಒಂದೊಂದು ಕಥೆಗಳ ಹೇಳುವ ಕಲೆ ನನಗೆ
ಬಂದಿದ್ದು ಅವಳಿಂದಲೇ.. ​

ಅವಳೇ ಒಂದು ಪ್ರಕೃತಿ!!!


ಇಂದಿಗೆ ಅವಳಿಲ್ಲದೆ ಎಷ್ಟೋ ವರುಷಗಳು ಕಳೆದವು.. ಅವಳ ನೆನಪುಗಳೊಂದಿಗಿನ ಈ ನನ್ನ ಪಯಣದಲಿ ನಾ ಅವಳ ಸುತ್ತಲೇ ಸುತ್ತುತ್ತಿದ್ದೇನೆ... ಅದೇ ತುಳಸಿ ಕಟ್ಟೆ ಅವಳೇ ಹೇಳಿದ ಮಾತುಗಳು ಪ್ರಕೃತಿಗೆ ನಾವೆಲ್ಲರು ಒಂದೇ ಎಂದೂ...


ಅವಳ ಹೆಸರಿನಲ್ಲಿ ದೀಪವ ಹಚ್ಚಿ, ಕಣ್ಣು ಮುಚ್ಚಿದೆ ಜೋರಾದ ಗುಡುಗಿನ ಶಬ್ಧ​.. ​
ಕಣ್ಣು ಬಿಟ್ಟಾಗ ಮತ್ತದೇ ಜಾಗದಲ್ಲಿ ತುಳಸಿಯ ಪಕ್ಕದಲ್ಲಿ ಮಳೆಯ
​ಜೊತೆಯಲ್ಲಿ ನಿಂತು ಕೈಬೀಸಿ ಕರೆದಳು ಅಮ್ಮಾ​, ನನ್ನಮ್ಮಾ!


ಮತ್ತೊಮ್ಮೆ ಮಗುವಾದೆ ಅವಳೆಡೆಗೆ ಓಡಿದೆ...

​"​ಮಳೆಗೆ ಇವಳ
ಜೊತೆ​ಯಾ
ಇಲ್ಲಾ ಇವಳೇ ಮಳೆಗೆ ಜೊತೆಯಾಗುತ್ತಾ​ಳಾ
ಗೊತ್ತಿಲ್ಲಾ​"​


ಪ್ರತಿ ಬಾರಿಯು ಮಳೆಯಲ್ಲಿ ಆಡಿ ಕುಣಿದು ನಗಿಸುತ್ತಾಳೆ... ನನ್ನಮ್ಮ ಅವಳೊಂದು ಪ್ರಕೃತಿಯೇ... ಅವಳಿಗೆ ನಾ ಎಂದೆಂದು ಮಳೆಯ ಹನಿಯೇ....​!​

                              ದಿವ್ಯ ಭರತ್......

Sunday, 11 March 2018

ಕಂಬಿ ಮೇಲಿನ ಹನಿಗಳು.....

ತುಂಬಾ ದಿನಗಳ ನಂತರ ರೈಲಿನ ಪ್ರಯಾಣ, ಇದಕ್ಕಾಗಿ ಅಮ್ಮ ಮೂರು ದಿನಗಳಿಂದ ತಯಾರಿ ಮಾಡುತ್ತಿದ್ದಾಳೆ.. ಚಕ್ಕುಲಿ, ಕೊಡುಬಳೆ, ಒಂದಷ್ಟು ಮಂಡಕ್ಕಿ ಚುರುಮುರಿಯನ್ನು ಮಾಡಿ ಜೋಡಿಸಿಟ್ಟು ಕೊಂಡಿರುವುದನ್ನು ಕಂಡು, ನಾನು  ರೈಲಿನಲ್ಲಿ ಎಲ್ಲವೂ ಸಿಕ್ಕುತ್ತಲ್ಲಾ ನಿನಗೇಕೆ ಈ ಕಷ್ಟ ಎಂದೆ, ಅವಳು ಅಲ್ಲಿ ತಿಂದರೆ ಏನು ಚೆನ್ನಾಗಿರುತ್ತೆ ನಾವು ಮಾಡಿದಾಗೆ ಇರುತ್ತಾ ಎಂದು ಅವುಗಳಿಗಾಗಿಯೇ ಒಂದು ಬ್ಯಾಗ್ ಸಿದ್ದಮಾಡಿಟ್ಟಳು ....
ಬೆಳಗ್ಗೆ 3 ಗಂಟೆಗೆ ಎಲ್ಲರೂ ಎದ್ದು ಸ್ನಾನ ಮುಗಿಸಿ, ರೆಡಿ ಆಗಿ ಸರಿಯಾಗಿ 4.30 ಕ್ಕೆ ಮನೆಯಿಂದ ಹೊರಗೆ ಬಂದರೆ, ಆಗಲೇ ತಿಳಿಸಿದ್ದ ಆಟೋದವರು ಮನೆಯ ಮುಂದೆ ಬಂದು ಕಾಯುತ್ತಿದ್ದರು ನಾವೆಲ್ಲರೂ  ಆ ಎರಡು ಆಟೋದಲ್ಲಿ ರೈಲ್ವೆ ಸ್ಟೇಷನ್ಗೆ ಬಂದು ಇಳಿದೆವು... ಈಗಾಗಲೇ ಟಿಕೆಟ್ ತೆಗೆಕೊಂಡಿದ್ದ ಕಾರಣ ನೇರವಾಗಿ ಫ್ಲಾಟ ಫಾರಂಗೆ ಬಂದು ನಿಂತ 10 ನಿಮಿಷಗಳಲ್ಲಿ,,, ಮೈಸೂರು - ಶಿವಮೊಗ್ಗ - ತಾಳಕೊಪ್ಪ  ರೈಲು ಬಂದು ನಿಂತಿತು.....

ಅಮ್ಮ ನಿಗೆ ಶಿವಮೊಗ್ಗ ಎಂದರೆ ಹುಚ್ಚು ಪ್ರೀತಿ, ಅವಳ ಜೀವನ ಶುರುವಾಗಿದ್ದು ಅಲ್ಲಿಂದಲೇ ಎನ್ನುತ್ತಾ, ಪ್ರತಿ ರಸ್ತೆಯ ಬಗ್ಗೆಯು ಒಂದೊಂದು ಕಥೆಯ ಹೇಳುತ್ತಿರುತ್ತಾಳೆ, ನಾನು ಹುಟ್ಟಿದ್ದು ಕೂಡ ಅಲ್ಲಿಯೇ ಮೀನಾಕ್ಷಿ ಹಾಸ್ಪಿಟಲ್ನಲ್ಲಿ  ಅಂತೆ ಆದರೆ ಆ ಹಾಸ್ಪಿಟಲ್ ಈಗಿಲ್ಲಾ..
ಆದರೆ,, ಈಗ ನಾವೆಲ್ಲರೂ ಹೊರಟಿರೋದು ಶಿವಮೊಗ್ಗಕ್ಕಲ್ಲಾ ಸಿಗಂದೂರಿನ ಚೌಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ......
6.10 ನಿಮಿಷಕ್ಕೆ ರೈಲು ಹೊರಟಿತು!!! ಕಿಟಕಿಯ ಪಕ್ಕದಲ್ಲಿ ನಾನೇ ಕುಳಿತುಕೊಳ್ಳುವುದೆಂದು ಮೂರು ದಿನಗಳ ಹಿಂದೆಯೇ ನಿರ್ಧಾರವು ಆಗಿತ್ತು... ರೈಲು ಕೆ.ಆರ್. ನಗರ ದಾಟುವ ಮೊದಲೇ ಜಿಟಿ ಮಳೆ ಶುರುವಾಯಿತು,, ಬೆಳಗಿನ ಸೂರ್ಯ ನಿಧಾನವಾಗಿ ಉದಯಿಸಲು ಪ್ರಯತ್ನಿಸುತ್ತಿದ್ದರು ಮೋಡಗಳು ತಡೆಯಲು ತಮ್ಮೆಲ್ಲಾ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದವು... ನೂರಾರು ಊರುಗಳು,, ಹತ್ತಾರು ಪರಿಸರ, ಮಳೆಯ ನಡುವೆ ಅವರ ಪರದಾಟವನ್ನು ರೈಲಿನ ಒಳಗೆ ಕೂತು ನೋಡುವಾಗ ಅಧೆಂತದೋ ಆನಂದ... ಹಾಸನದ ರಸ್ತೆಗಳು ಮಳೆಗೆ ಬಿಕೋ ಎನ್ನುತ್ತಿದ್ದವು,, ಹಳ್ಳಿಗಳಲ್ಲಿ  ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಟವಲ್ ಹಾಕಿಕೊಂಡು ನಡೆಯುವುದು ಕಾಣ ಸಿಗುತ್ತಿತ್ತು.. ಹೀಗೆ ಒಂದಷ್ಟು ಗಂಟೆಗಳ ನಂತರ ಭದ್ರಾವತಿಯಲ್ಲಿ ರೈಲು ಬಂದು ನಿಂತಾಗ  ಅಲ್ಲಿ  ಜೋರು ಮಳೆ ಬಂದು ನಿಂತಾಗಿತ್ತು,, ಅಮ್ಮ ತಂದಿದ್ದ  ಚಕ್ಕುಲಿ ಕೊಡುಬಳೆ ಕೊಡ ಅರ್ಧದಷ್ಟು ಖಾಲಿ ಆಗಿದ್ದವು.. ನಾನು ಅಮ್ಮ ತಮ್ಮ, ದೊಡ್ಡಮ್ಮ, ಅತ್ತೆ, ಮಾವ  ಅವರ ಮಕ್ಕಳು ಎಲ್ಲರ ಮಾತು, ತಮಾಷೆ ಇಡೀ ಬೋಗಿಗೆ ಕೇಳಿಸುವಂತಿತ್ತು.....

ಶಿವಮೊಗ್ಗಗೆ ಬರುತ್ತಿದ್ದ ಹಾಗೆಯೇ,,, ಈಗಾಗಲೇ ಅಮ್ಮ ಶಿವಮೊಗ್ಗದಲ್ಲಿರುವ ಚಿಕ್ಕಮ್ಮನಿಗೆ ಬರುವ ವಿಷಯ ತಿಳಿಸಿದ ಕಾರಣ ಮಧ್ಯಾಹ್ನದ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಿದ ಬ್ಯಾಗ್ ಸಮೇತ ಸ್ಟೇಷನ್ನಿನಲ್ಲಿ ಕಾದಿದ್ದರು.. ನಮ್ಮ ಕೈಗೆ ಬ್ಯಾಗ್ ಕೊಟ್ಟು ಜೊತೆಗೆ  ವಾಪಸ್ ಬರುವಾಗ  ಮನೆಗೆ ಬನ್ನಿ ಎಂಬ ಸಂದೇಶವನ್ನಿಟ್ಟು ಹೊರಟರು....

ಅಲ್ಲಿಂದ ಬರೀ ಮಳೆಯ ಆರ್ಭಟವೇ,, ರೈಲಿನಲ್ಲಿದ್ದ ಜನರೆಲ್ಲಾ ಶಿವಮೊಗ್ಗದಲ್ಲಿಯೇ ಆದಷ್ಟೂ ಖಾಲಿಯಾಗಿದ್ದರು, ಒಂದಷ್ಟು ಜನರನ್ನು ಬಿಟ್ಟರೆ ಮತ್ಯಾರು ಕಾಣಲಿಲ್ಲಾ.. ನಮ್ಮ ಮನೆಯವರೆಲ್ಲಾ ಅದಾಗಲೇ ಮಂಕಾಗಿದ್ದರು,  ಆದರೆ ಸುಂದರ ಪ್ರಕೃತಿಯ ಸೊಬಗು ಶುರುವಾಗಿದ್ದೇ ಅಲ್ಲಿಂದ..
ಸಾಗರದ ನಿಲ್ದಾಣದ ತಲುಪಿದಾಗ 12.45 ಆಗಿತ್ತು ಇಳಿದು  ಎಲ್ಲಾ ಲಗೇಜನ್ನು ಮತ್ತೊಮ್ಮೆ ನೋಡಿಕೊಂಡು ಊಟ ಮುಗಿಸಿ, ಟ್ಯಾಕ್ಸಿ ಹತ್ತಿ ಸಾಗರದ ಬಸ್ ಸ್ಟಾಪಿಗೆ ಬಂದೆವು... ಜೋರು ಮಳೆ ಆದರೂ ಮಳೆಗೆ ಹೆದರದ ಜನರೆಲ್ಲರ ಕೈಯಲ್ಲು  ಒಂದೊಂದು ಕೊಡೆ,, ಚಿತ್ರ ವಿಚಿತ್ರ ಕೊಡೆಗಳ ನೋಡ  ಬೇಕೆಂದರೆ ಬಹುಶಃ  ಮಲೆನಾಡಿಗೆ ಬರಬೆಕು... ಮಳೆಗಾಲದಲ್ಲಿ ಕೊಡೆ ಅವರ ದೈನಂದಿನ ಜೊತೆಗಾರ..

ಸುಮಾರು ಹೊತ್ತಿನ ನಂತರ ಅಂದರೆ 4 ಗಂಟೆಗೆ ಬಂದ ಬಸ್ಸಿನಲ್ಲಿ, ಎಲ್ಲರೂ ಒಂದೊಂದು ಕಡೆ ಸೀಟನ್ನು ಹಿಡಿದು ಕುಂತೆವು,, ಅದೇನು ಅದೃಷ್ಟವು ಇಲ್ಲಿಯು ನನಗೆ ಕಿಟಕಿಯ ಭಾಗ್ಯ.. ಬಸ್ಸಿನ ತುಂಬಾ ಜನ!! ಒಂದಷ್ಟು ಚೆಂದದ ಹುಡುಗಿಯರು ನಿಜಕ್ಕೂ ಎಲ್ಲರ ಕೈಯಲ್ಲೂ ಬಳೆ, ತಲೆಯಲ್ಲಿ ಹೂ ನೋಡಿದಾಗ ಸಾಗರದ ಹುಡುಗಿಯರ ಮೇಲೆ ಪ್ರೀತಿ ತನಗೆ ತಾನೇ ಮೂಡುತ್ತದೆ!! ಇನ್ನೂ ಮಧ್ಯ ವಯಸ್ಕರ ಪ್ರತಿಯೊಬ್ಬರ ಬಾಯಲ್ಲೂ ಎಲೆ ಅಡಿಕೆಯ ಬಣ್ಣ......
ಆ ರಷ್ ನಲ್ಲೂ ಬಸ್ಸ್ ಓಡಿಸುವುದು ಸಾಹಸವೇ ಸರಿ.. ಮಳೆಯಲ್ಲು ಬಸ್ಸಿನ ಮೇಲೆ ಕೂರುವ ಜನರು,, ಮಳೆಯ ನಡುವೆಯು ರಸ್ತೆಯ ಬದಿಯಲ್ಲಿ ಗೋಣಿ ಚೀಲವನ್ನು ತಲೆಯ ಮೇಲೆ ಹಾಕಿಕೊಂಡು ಆರಾಮವಾಗಿ ನಡೆದಾಡುವುದು, ಗದ್ದೆಗಳಲ್ಲಿ ಕೆಲಸಗಳನ್ನು ಮಾಡುವುದು,, ಇವೆಲ್ಲವನ್ನು ಕಂಡಾಗ ಒಮ್ಮೆ ಆದರೂ ಈ ಅನುಭವ ನಮಗೂ ಬೇಕೆನಿಸುತ್ತದೆ... ಸಾಗರದಿಂದ ಹೊರಟ ಬಸ್ಸು ಸಿಗಂದೂರು ತಲುಪುವ ಮೊದಲು ಶರವಾತಿ ನದಿಯಿಂದ ಆವೃತವಾದ ಹಿನ್ನೀರಿನ ದಡವನ್ನು ದಾಟ ಬೇಕು , ಅದಕ್ಕಾಗಿ ಅಲ್ಲಿ ಲಾಂಚ್ನ ವ್ಯವಸ್ಥೆಯನ್ನೂ ಮಾಡಿದ್ದಾರೆ... ಲಾಂಚ್ ಬರಲು ಇನ್ನೂ ಸಮಯವಿತ್ತು,,
ಆ ಸಮಯದ  ನಡುವೆ ಅಲ್ಲಿನ ಸುಂದರ ಪ್ರಕೃತಿಯು ನೂರಾರು ಮಾತುಗಳನ್ನು, ಒಂದಷ್ಟು ಗುಟ್ಟುಗಳನ್ನು ತಿಳಿಸುತ್ತಿವೆ ಎಂಬಂತಹ ಸೆಳೆತವಾಯಿತು... ಆ ನದಿ ,, ಸಣ್ಣ ಸಣ್ಣ ಗುಡ್ಡಗಳು,, ಸುಂದರ ಗಿಡಮರಗಳು,, ಮಳೆಯ ಸದ್ದು,, ಆಹಾ!! ಆ ಅದ್ಭುತವಾದ ದೃಶ್ಯವನ್ನು ಕಣ್ತುಂಬಿ ಕೊಂಡವರಿಗೆ ಮಾತ್ರವೇ ಆ!! ಆನಂದ ಸಿಕ್ಕುವುದೇನೊ... ಆ ನದಿ ದಂಡೆಯ ಕೊನೆಯ ಲಾಂಚ್ ಬಂದಿತು.. ಈಗಾಗಲೇ ಸಾಲಿನಲ್ಲಿ ನಿಂತಿದ್ದ ಎಲ್ಲಾ ವಾಹನಗಳನ್ನು ನಮ್ಮ ಬಸ್ಸ್ನನ  ಜೊತೆಗೆ ಒಂದಷ್ಟು ಜನರನ್ನು ತುಂಬಿಕೊಂಡು ಈ ದಡದಿಂದ ಆ ದಡಕ್ಕೆ ಹೊರಟಿತು,, 10 ನಿಮಿಷಗಳ ಪ್ರಯಾಣಕ್ಕೆ ಕೇವಲ 1ರೂ !!! ಆ ಪ್ರಯಾಣ ಮಾತ್ರ ಎಷ್ಟೋ ಗಂಟೆಗಳಲ್ಲು ಸಿಕ್ಕದ ಅನುಭವವನ್ನು
ಕಣ್ಣಿಗೆ ಕಟ್ಟಿಕೊಡುತ್ತದೆ.. ಸಿಂಗದೂರು ತಲುಪಿದಾಗ ರಾತ್ತಿ ಆಗಿತ್ತು, ಮಳೆಯ ಜಿಡಿ ನಿಲ್ಲುವ ಯಾವ ಸೂಚನೆಯನ್ನು ಕೊಟ್ಟಿರಲಿಲ್ಲ!! ಈಗಾಗಲೇ ಕಾಯ್ದಿರಿಸಿದ ರೂಮಿಗೆ ಬಂದು ಫ್ರೆಶ್ ಆಗಿ, ಪ್ರಧಾನ ಅರ್ಚಕರ ಮನೆಗೆ ಹೋಗಿ ಬೆಳಗಿನ  ಮೊದಲ ಪೂಜೆಗೆ ಚೀಟಿ ಬರೆಸಿ ರೂಮಿಗೆ ಬಂದೆವು.. ಚಿಕ್ಕಮ್ಮ ತಂದು ಕೊಟ್ಟದ್ದನ್ನು ಎಲ್ಲರು ತಿಂದು ಮಲಗಿದೆವು.. ಮಧ್ಯ ರಾತ್ರಿ ಎದ್ದು ಆ ಮಳೆಯಲ್ಲು,,,, ಚಳಿಯಲ್ಲು,,, ತಣ್ಣೀರಿನ ಸ್ನಾನ ಮಾಡುವಾಗ ನಿಜಕ್ಕೂ ಎಲ್ಲಾ ದೇವರ ಹೆಸರುಗಳು ಒಂದಿಲ್ಲೊಮ್ಮೆಗೆ ಸರಗವಾಗಿ ನೆನಪಾಗಿ ಬಿಡುತ್ತದೆ... ಎಲ್ಲಾ ತಯಾರಿ ಮಾಡಿಕೊಂಡು ದೇವಾಲಯದ ಸರದಿ ಸಾಲಿನಲ್ಲಿ ನಿಂತೆವು... ಬೆಳಗಿನ ಜಾವದ ಮೊದಲ ಮಹಾ ಮಂಗಳಾರತಿಯನ್ನು ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರಿಗೆ ಮಾಡುವಾಗ ನೋಡುವುದು ಪೂರ್ವ ಜನ್ಮದ ಪುಣ್ಯವೆಂದೇ ಹೇಳಬಹುದು... ಬಗೆಬಗೆಯ ಹೂಗಳ ಅಲಂಕಾರ ಅದರಲ್ಲೂ ಮಂಗಳೂರು ಮಲ್ಲಿಗೆಯ ಘಮಲು!! ಚಿನ್ನದ ಮುಖವಾಡದಿಂದ ಕಂಗೊಳಿಸುವ ಅಮ್ಮ!! ಅವಳ ಪ್ರೀತಿ ತುಂಬಿದ ಕಣ್ಣುಗಳು... ಗಂಟೆ, ಜಾಗಟೆಗಳ ಶಬ್ದ, ಮಂತ್ರಗಳಿಂದ ನಮ್ಮೆಲ್ಲಾ ನೋವುಗಳನ್ನು ಮರೆಯುವಂತೆ ಮಾಡಿ ನಮ್ಮನ್ನು ಭಕ್ತಿಯಿಂದ ಮೈ ಮರೆಸಿಬಿಡುತ್ತದೆ... ಯಾವ ಕಷ್ಟ,, ಏನು ಬೇಡಿಕೊಳ್ಳಬೇಕು,, ಯಾವುದು ತಿಳಿಯುವುದಿಲ್ಲ..

ಒಂದೊಂದು ಗುಂಪಾಗಿ ಅಮ್ಮ ನ ಅನತಿ ದೂರದಲ್ಲಿ ಕುಳ್ಳಿರಿಸಿ ಮನದ ಇಷ್ಟವನ್ನು ಬೇಡಲು ಅರ್ಚಕರು ಹೇಳಿದರೆ ಕಣ್ಣು ಮುಚ್ಚಲು ಮನಸ್ಸೇ ಆಗುವುದಿಲ್ಲ ಅಮ್ಮನ ಸಾನಿಧ್ಯ ಅಂತಹದ್ದು... ದರ್ಶನವೆಲ್ಲಾ ಮುಗಿಸಿ ಹೊರ ಬಂದು ನಿಂತರೆ ಸುಂದರ ಪ್ರಕೃತಿಯೇ ನಮಗೆ ಶುಭೋದಯ! ಶುಭ ನುಡಿಗಳನ್ನು ತಿಳಿಸುತ್ತದೆ.. ಅಲ್ಲಿಯೇ ಬೆಳಗಿನ ಉಪಹಾರ ಮುಗಿಸಿ, ಮೊದಲ ಲಾಂಚ್ನಲ್ಲಿ ಹೊರಟು  ಮತ್ತೊಮ್ಮೆ ಅಲ್ಲಿಯ ಸುಂದರ ಹಸಿರ ಸಿರಿಗೆ ವಿದಾಯ ಹೇಳಿ  ಬಂದು ಬಸ್ಸ್ ಇಳಿದದ್ದು ಸಾಗರದಲ್ಲಿ.. ನಂತರ ಟ್ರೈ ನ್  ಬರಲು ಇನ್ನೂ ಸಾಕಷ್ಟು ಸಮಯವಿದ್ದ‌ ಕಾರಣ ಬೇರೊಂದು ಬಸ್ಸಿನಲ್ಲಿ ಸಾಗರ ಪಕ್ಕದ ವರದಳ್ಳಿಗೆ ತೆರಳಿದೆವು,,, ವರದಳ್ಳಿ ಶ್ರೀಧರ ಸ್ವಾಮಿಗಳ ಕ್ಷೇತ್ರ... ಬಸ್ಸಿಳಿದು ಒಂದಷ್ಟು ಮೆಟ್ಟಿಲುಗಳನ್ನು ಹತ್ತಿ ದರೆ ಪವಿತ್ರ ಸ್ಥಳ ನಿಜಕ್ಕೂ ನಿಶ್ಯಬ್ದತೆಯಲ್ಲೂ ನಿರಂತರವಾಗಿ ಕಾಡುವ ಭಕ್ತಿ, ವಿನಯತೆ ನಮ್ಮನ್ನು ಆವರಿಸುತ್ತದೆ... ಸುಂದರ ಪ್ರಕೃತಿಯ ನಡುವೆ ಇರುವ ಆ ಜಾಗ ಯಾವ ಋಣಾತ್ಮಕ ಚಿಂತನೆಯನ್ನು ಮನಸ್ಸಿನಲ್ಲಿ ಬರಲು ಬಿಡುವುದಿಲ್ಲ... ಅದರಲ್ಲೂ ಅಲ್ಲಿ ಹರಿವ ಝರಿ !!! ವಿಸ್ಮಯದ ಆಗರ.. ಆ ಝರಿಯ ನೀರನ್ನು ಕುಡಿದರೆ, ಅಥವಾ ಅಲ್ಲಿ ಸ್ನಾನ ಮಾಡಿದರೆ ಯಾವ ಚರ್ಮ ರೋಗವು ಬರುವುದಿಲ್ಲವೆಂಬ ಪ್ರತೀತಿ ಇದೆ.. ನಾವು ಸಹ ಆ ಪವಿತ್ರ ನೀರನ್ನು ಕುಡಿದು ಒಂದಷ್ಟು ಸಂಗ್ರಹಿಸಿ ಕೊಂಡು.. ಅಲ್ಲಯೇ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ.. ಬಸ್ಸಿನಲ್ಲಿ ಸಾಗರಕ್ಕೆ ವಾಪಸ್ಸಾಗಿ ರೈಲ್ವೆ ಸ್ಟೇಷನ್ಗೆ ಬಂದು ಸೇರಿದೆವು.. ಸಂಜೆ 4.15ಕ್ಕೆ ರೈಲು ಬಂದಿತು, ಎಲ್ಲರೂ ಮತ್ತೆ ಮೈಸೂರಿಗೆ ವಾಪಸ್ ಪ್ರಯಾಣ ಶುರುಮಾಡಿದೆವು .. ಮಳೆಯಂತು ಬರುತ್ತಲೇ ಇತ್ತು.. ಮಳೆಯ ಬಗ್ಗೆ ಎಲ್ಲರಿಗೂ ಕೊಂಚ ಬೇಸರವಿತ್ತು.. ನನಗೆ ಅಂದು ಆ ಪ್ರಕೃತಿಯನ್ನು ಸಿಂಗರಿಸಿ ಫಳಫಳನೆ ಹೊಡೆಯುವಂತೆ ಮಾಡಿದ ಮಳೆಯ ಪ್ರತಿಯೊಂದು ಹನಿಯ ಮೇಲೆ ಪ್ರೀತಿ ಹುಟ್ಟಿತ್ತು... ಮೈಸೂರಿಗೆ ಬಂದು ತಲುಪಿದಾಗ ರಾತ್ರಿಯಾಗಿತ್ತು,, ಮಳೆಯಿರಲಿಲ್ಲ.. ಆದರೆ, ರೈಲಿನ ಕಿಟಕಿಯ ಕಂಬಿಗಳ ಮೇಲೆ ಇನ್ನೂ ಹನಿಗಳು ಸಾಲುಗಟ್ಟಿ ನಿಂತಿದ್ದವು!!! ಮತ್ತೊಮ್ಮೆ ಸಿಗಂದೂರಿಗೆ ಬರಲು ನಗುನಗುತ್ತಲೇ ಸ್ವಾಗಸಿದವು....

                                                 ದಿವ್ಯ ಭರತ್...