Tuesday, 27 March 2018

ನನ್ನಮ್ಮ ಅವಳೊಂದು ಪ್ರಕೃತಿ..


ನನಗಾಗ 4 ವರುಷ.. ಇದ್ದಕ್ಕಿದ್ದಂತೆ ಒಂದು ದಿನ ಜೋರು ಮಳೆ ಗುಡುಗಿನ ಶಬ್ಧ !!

ನಾನು ಜೋರಾಗಿ ಚೀರುತ್ತಾ

​"​ಅಮ್ಮಾ​.. ​ಅಮ್ಮಾ​... "​
ಎಂದು ಕೋಣೆಯಿಂದ ಓಡಿದೆ..

ಹಪ್ಪಳ, ಸಂಡಿಗೆ ತುಂಬಿದ ಡಬ್ಬಗಳ ಹಿಡಿದು ತಾರಸಿಯಿಂದ ಇಳಿದು ಬಂದಳು ನನ್ನ ಕೂಗಿಗೆ ಹೆದರಿ..​!​

ನಾನು ಅಳುತ್ತಾ ಹಜಾರದ ಕಂಬವಿಡಿದು ನಿಂತಿದ್ದನ್ನು ಕಂಡು ಅಲ್ಲಿಯೇ ಕುಳಿತುಕೊಂಡು ಸೆರಗಿನಲ್ಲಿ ಕಣ್ಣೀರ ಒರೆಸುತ್ತಾ ಸಮಾಧಾನಿಸಿ ಏನಾಯಿತೆಂದಳು??


ನಾನು

​"​ಮಳೆ​..ಮಳೆ​.. ಎಂದೆ...

ಅವಳು ​"​ಓ ಮಳೇ​... "​
ಎಂದು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..

ನಾನು ಮಿಂಚಿಗೆ ಹೆದರಿ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡೆ....

ನನ್ನಮ್ಮನ ಕೈ ಬಳೆಗಳ ಶಬ್ಧದಲ್ಲಿ ,,, ಕಾಲ್ಗೆಜ್ಜೆಯ ಘಲು ಘಲುವಿನಲ್ಲಿ,, ಮುಡಿದ ಮಲ್ಲಿಗೆಯ ಕಂಪಿನಲ್ಲಿ ಇದೆಲ್ಲಕ್ಕಿಂತಲೂ ಮಿಗಿಲಾಗಿ ಅವಳ ಸೀರೆಯ ಸೆರಗ ಅಂಚಿನಲ್ಲಿ ಅದೆಂಥದೋ ಶಕ್ತಿ ಇರುತ್ತದೆ​.

ಏನೇ ಬಂದರೂ ಅವಳಿದ್ದಾಳೆ  ನನ್ನ ರಕ್ಷಿಸುತ್ತಾಳೆ ಎಂಬ ಭಾವ ಮೂಡಿಸುತ್ತದೆ....

ಸೆರಗ ಮುಚ್ಚಿ ಮಲಗಿದ ನನ್ನ ತನ್ನೆರಡು ಕೈಗಳಿಂದ ಬಾಚಿಕೊಂಡು
​"​ಕಂದಾ, ಈ ಮಳೆಗೆ ಹೆದರಿಕೆಯಾ ನಿನಗೆ​"​
ಎಂದಳು..


​"​ಹೂಂ​" ​ಎಂದೆ...

​"​ಅಯ್ಯೋ ಈ ಮಳೆಯೇ  ಸಕಲ ಜೀವ ರಾಶಿಗಳಿ​ಗೂ ಬದುಕಿನ ಚಿಲುಮೆ ಬಂಗಾರಿ.....  ಇದು ಪ್ರಕೃತಿಯ ಒಂದು ಭಾಗ ; ಇದರಿಂದಲೇ ನಾವು​"​ ಎಂದಳು...


​"​ಅದೇಗಮ್ಮಾ ನಾವು​...."

"ಬಂಗಾರಿ "ನೋಡು ಮಳೆರಾಯ ಬಂದ ಮೇಲೆ​ನೇ ನಾವು ಹೊಲ ಉಳುವುದು ಗೊತ್ತಾ...​!​
ನೀನು ನಾಟಿ ಮಾಡ್ತೀನಿ ಅಂದೆ ಅಲ್ವಾ ಮೊನ್ನೆ ...​"


​"ಹು  ನಾನು ನಾಟಿ ಮಾಡ್ತೀನಿ ಅಮ್ಮ ​ನಾನೂನೂ "

​"​ಸರಿ ಸರಿ
ಮಾಡುವೆ​ಯಂತೆ  ಆದ್ರೆ ಅದಕ್ಕೆ ಈ ಮಳೆ ಬರಬೇಕು ಮಳೆ ಬಂದರೇನೆ ನಾವು ಭತ್ತದ ಪೈರು ನಾಟಿ ಮಾಡೋಕೆ ಆಗೋದು.. ಅಷ್ಟೇ ಏಕೆ ನಾವು ಬಟ್ಟೆ ಒಗೆಯಲು ಹಳ್ಳಕ್ಕೆ ಹೋದಾಗ ಅವತ್ತು ಅಮ್ಮಾ ಆಟ ಆಡಲು ನೀರೆ ಇಲ್ಲಾ ಇಲ್ಲಿ ಎಂದೆಯಲ್ಲ... ಹಳ್ಳ - ಕೊಳ್ಳ ತುಂಬ ಬೇಕು ಅಂದ್ರೆ ಅದಕ್ಕೂ ಈ ಮಳೆ ಬರಬೇಕು..​"​

 "​ಹೂಂ  ಹೌದು​"​"

"ಈ ಮಳೆ ಬರದೇ ಹೋದರೆ ಬರಗಾಲ ಬರುತ್ತೋ ಬಂಗಾರಿ...​"


​"​ಬರಗಾಲ ಅಂದರೇನಮ್ಮಾ??? ​"


"​ಅಜ್ಜಿಗೆ ಯಾಕಮ್ಮ ಹೀಗೆ ಕಾಲೆಲ್ಲಾ ಒಡೆದಿದೆ ಎಂದು ಕೇಳಿದಾಗ ನಾನು ನಿನಗೆ ಏನೇಳಿದೆ​?"


"ಕೊಬ್ಬರಿ ಎಣ್ಣೆ ಹಚ್ಚಲು ಹೇಳಿದೆ ನಾನು ದಿನ ಅಜ್ಜಿ ಮಲಗಿದಾಗ ಹಚ್ಚುತ್ತೀನಿ ಅಲ್ವಾ ಅಮ್ಮಾ​"


"ಹೌದು ನನ್ನ ಬಂಗಾರಿ ಜಾಣೆ... ಅಜ್ಜಿ ಕಾಲಿನ ಹಾಗೆ
ಭೂತಾಯಿಯ​ಲ್ಲೂ
ಬಿರುಕು ಮೂಡುತ್ತದೆ ಕಂದಾ.. ಆಗ ಹಳ್ಳ ಕೊಳ್ಳ ದಲ್ಲಿ ನೀರು ಸಿಕ್ಕೋಲ್ಲ,, ನಾಟಿ ಮಾಡಕೆ ಆಗೋಲ್ಲ,, ನಮ್ಮ ನೆ ಹಸುಗಳು ಗೌರಿ, ದಾಕ್ಷಾಯಿಣಿ, ತುಂಗೆಗೆ ಮೇಯಲು ಮೇವು ಸಿಕ್ಕೋಲ್ಲಾ ಅದೇ ಬರಗಾಲ!!!...​"​



​"​ಹೌದಾ..  ​"

"ನನ್ನ  ಕಣ್ಣಿನಲ್ಲಿ ನೀರಿನ ಹನಿಗಳ ತುಂಬಿಕೊಂಡು
​"​

"ಅದು ಬರಲೇ ಬಾರದು ಅಲ್ವಾಮ್ಮಾ​"
ಎಂದು ಸೆರಗ ಸರಿಸಿ ಕೆನ್ನೆ ಮುಟ್ಟುತ್ತಾ ಕೇಳಿದೆ..


​"​ಹೌದು ಬಂಗಾರಿ ಬರಬಾರದು .... ಆದರೆ ಈ ಜಗತ್ತು ಪ್ರಕೃತಿಯ ಆಸ್ತಿ ಇಲ್ಲಿ ಯಾವಾಗ ಏನು ಆಗಬೇಕೋ  ಅದೇ ಆಗುವುದು... ನಾನಾಗಲಿ ನೀನಾಗಲಿ ಇದರಂತೆಯೇ ನಡೆಯಬೇಕು.. ಮಳೆಯಿಂದಲೇ ಬೆಳೆ,, ಬೆಳೆವವನೇ ರೈತ" ​

ಎಂದಾಗ ಮೆಲ್ಲಗೆ ಎದ್ದು ಕುಳಿತುಕೊಂಡೆ ನಾನು..


​"​ಅಮ್ಮ ಹಾಗಾದರೆ ಅಪ್ಪ ರೈತ ಅಲ್ವಾ ಅಮ್ಮಾ​!" ​
ಎಂದು  ಖುಷಿಯಿಂದ ಕೈಗಳಲ್ಲಿ ಚಪ್ಪಾಳೆಗಳ ತಟ್ಟಿದೆ....


​"​ಬಂಗಾರಿ ನಮ್ಮ ಎಷ್ಟೋ ನೋವುಗಳು ಸಂಕಟಗಳು ಈ ಮಳೆಯಿಂದಲೇ
ಕೊಚ್ಚಿಕೊಂಡು ಹೋಗುತ್ತವೆ​"​
ಎಂದು  ಹಜಾರದ ಮೆಟ್ಟಿಲಿಳಿದು ಮನೆಯ ತುಳಸಿ ಕಟ್ಟೆಯ ಪಕ್ಕದಲ್ಲಿ ನಿಂತು ಕೈಬೀಸಿ ಕರೆದಳು ನನ್ನಮ್ಮ ನನ್ನನ್ನು...

ಮೊದಲ ಬಾರಿ ಅಮ್ಮನ ಕೈಹಿಡಿದು ಮಳೆಯಲ್ಲಿ ನೆನೆದು ಆಡಿ ಕುಣಿದದ್ದು....


ನನ್ನಮ್ಮ ಅಂದು ನನ್ನ ಸಂತೈಸಿದ ರೀತಿ ಇಂದು ನಾನು ಪ್ರಕೃತಿಯ ಮತ್ತು ಬದುಕಿನ ಮೇಲೆ ಇಟ್ಟಿರುವ ನಂಬಿಕೆಗೆ​,
ಪ್ರೀತಿಗೆ ಕಾರಣ.. ಅವಳ ನಗು ಕೈ ಬಳೆ...ಕಾಲ್ಗೆಜ್ಜೆಯ ಶಬ್ಧ... ಒಂದೊಂದು ವಸ್ತುವಿ​ಗೂ,
ವಿಷಯಕ್ಕೂ
ಒಂದೊಂದು ಕಥೆಗಳ ಹೇಳುವ ಕಲೆ ನನಗೆ
ಬಂದಿದ್ದು ಅವಳಿಂದಲೇ.. ​

ಅವಳೇ ಒಂದು ಪ್ರಕೃತಿ!!!


ಇಂದಿಗೆ ಅವಳಿಲ್ಲದೆ ಎಷ್ಟೋ ವರುಷಗಳು ಕಳೆದವು.. ಅವಳ ನೆನಪುಗಳೊಂದಿಗಿನ ಈ ನನ್ನ ಪಯಣದಲಿ ನಾ ಅವಳ ಸುತ್ತಲೇ ಸುತ್ತುತ್ತಿದ್ದೇನೆ... ಅದೇ ತುಳಸಿ ಕಟ್ಟೆ ಅವಳೇ ಹೇಳಿದ ಮಾತುಗಳು ಪ್ರಕೃತಿಗೆ ನಾವೆಲ್ಲರು ಒಂದೇ ಎಂದೂ...


ಅವಳ ಹೆಸರಿನಲ್ಲಿ ದೀಪವ ಹಚ್ಚಿ, ಕಣ್ಣು ಮುಚ್ಚಿದೆ ಜೋರಾದ ಗುಡುಗಿನ ಶಬ್ಧ​.. ​
ಕಣ್ಣು ಬಿಟ್ಟಾಗ ಮತ್ತದೇ ಜಾಗದಲ್ಲಿ ತುಳಸಿಯ ಪಕ್ಕದಲ್ಲಿ ಮಳೆಯ
​ಜೊತೆಯಲ್ಲಿ ನಿಂತು ಕೈಬೀಸಿ ಕರೆದಳು ಅಮ್ಮಾ​, ನನ್ನಮ್ಮಾ!


ಮತ್ತೊಮ್ಮೆ ಮಗುವಾದೆ ಅವಳೆಡೆಗೆ ಓಡಿದೆ...

​"​ಮಳೆಗೆ ಇವಳ
ಜೊತೆ​ಯಾ
ಇಲ್ಲಾ ಇವಳೇ ಮಳೆಗೆ ಜೊತೆಯಾಗುತ್ತಾ​ಳಾ
ಗೊತ್ತಿಲ್ಲಾ​"​


ಪ್ರತಿ ಬಾರಿಯು ಮಳೆಯಲ್ಲಿ ಆಡಿ ಕುಣಿದು ನಗಿಸುತ್ತಾಳೆ... ನನ್ನಮ್ಮ ಅವಳೊಂದು ಪ್ರಕೃತಿಯೇ... ಅವಳಿಗೆ ನಾ ಎಂದೆಂದು ಮಳೆಯ ಹನಿಯೇ....​!​

                              ದಿವ್ಯ ಭರತ್......

2 comments:

  1. ಇಳೆಗೆ ಮಳೆ ಬೀಳುವಾಗ ಜಗವೂ ಸುಂದರ
    ಜಗವೂ ಸುಂದರ ಯಾಕೆಂದರೆ ಮನಸು ಸುಂದರ

    ಮಳೆ ಬೀಳುವಾಗಿನ ಸುಂದರ ಸಂಭಾಷಣೆಗಳು
    ಒಂದು ಮುಗ್ಧ ಮಗು ಮತ್ತು ಮುಗ್ಧತೆಯ ಪ್ರತಿರೂಪ ಅಮ್ಮನ ಬಂಧವನ್ನು ಸೊಗಸಾಗಿ ಪರಿಚಯಿಸುತ್ತದೆ

    ಲಯ ತುಂಬಿದ ಬರಹ
    ಸೂಪರ್ ಡಿಡಿಪಿ

    ReplyDelete