ಬರದ ನಾಡಿನಲ್ಲಿ ಬರಿಕಾಲಿನಲ್ಲಿ
ನಿಂತ ರೈತ ತಲೆ ಎತ್ತಿ
ಸುಡು ಬಿಸಿಲ ಆಗಸವನ್ನು ನೋಡದೆ
ತಲೆ ತಗ್ಗಿಸಿ ಬಾಯ್ ಬಿಟ್ಟ
ಭುವಿಯನ್ನು ನೋಡದೆ
ದೂರದಲ್ಲಿ ಬೋಳಾಗಿ ಒಣಗಿ
ನಿಂತ ಮರವನ್ನೆ ನೋಡುತ್ತ
ನುಡಿದ ನನ್ನ ಅಂತೆಯೆ ಉಸಿರ ಬಿಗಿಹಿಡಿದು ನಿಂತು ಬಿಡು ಓ ಜೀವವೆ
ಇನ್ನೆಷ್ಟು ದಿನ ಇನ್ನೆಷ್ಟು ದಿನ!
ದೂರದಲೆಲ್ಲೊ ಪಟಾಕಿಗಳ ಸದ್ದು
ಸಿಹಿ ತಿನಿಸುಗಳ ಊಟ ಅಧಿಕಾರದ ಕಿತ್ತಾಟ ನನ್ನಿಂದಲ್ಲ ಅವನಿಂದ
ಅವನ್ನಿಂದಾಗದು ನನ್ನಿಂದೆಂಬ ಜೋರು ಕಹಳೆ
ಇಲ್ಲೆಲ್ಲೊ ತಾಯ ಎದೆಯಲ್ಲಿ ಹಾಲಿಲ್ಲದೆ ಕಣ್ಣು ಮುಚ್ಚಿದ ಹಸುಳೆ
ತಾಯ ಆಕ್ರಂದನ ಮುಗಿಲು ಮುಟ್ಟಿತು
ಇನ್ನೆಷ್ಟು ದಿನ ಇನ್ನೆಷ್ಟು ದಿನ!
ಮನ್ನವಾದರೇನು ನಾ ಮಾಡಿದ ಇಂತಿಷ್ಟು ಸಾಲ
ತರಲಾದೀತೆ ಕೂಡಿಟ್ಟು ನಾ ಹುತ್ತು ಬಿತ್ತಿದ್ದನ್ನೆಲ್ಲಾ
ಮನೆಯ ಹಸಿವ ನೀಗಿಸಲು
ಮಾರಾಯ್ತು ಇದ್ದಿದ್ದೆಲ್ಲಾ
ನನ್ನೀ ನೋವು ನೀಗಲು ಇರುವುದೊಂದಿಷ್ಟು ಹೊಲ ಕೈ ಹಿಡಿಯುವವರೆಗು
ಬರದಿರು ನೀ ಸಾವೆ
ಇನ್ನೆಷ್ಟು ದಿನ ಇನ್ನೆಷ್ಟು ದಿನ!
ಅಮ್ಮಾ ಬೇಡುತ್ತಿರುವೆ ಭೋರ್ಗರೆದು
ಸುರಿದು ಬಿಡಲಿ ಗಂಗೆ
ಕೊಟ್ಟಿಗೆಯಲ್ಲಿ ಕಟ್ಟಿದ ರಾಮ ಕೃಷ್ಣರಿಗೊಂದಷ್ಟು ಮೇವಾಕಿ ನೀರಾಡಿಸಿ ನೇಗಿಲಿಗೆ ಕೈಮುಗಿದು ಮುಂಜಾನೆಯಿಂದ ಮುಸ್ಸಂಜೆವರೆಗು ಹುತ್ತಿ ಬಿತ್ತು ನಿನ್ನನ್ನೆ ಕಾದು, ಕಳೆ ಸೊಕದೆ ನೀ ಸೊಂಪಾಗಿ ಬೆಳೆದು, ಹಸಿರ ಸಿರಿಯಲ್ಲಿ ನೀ ನಲಿಯುವುದು ಅದೆಷ್ಟು ಹೊತ್ತು
ಇನ್ನೆಷ್ಟು ದಿನ ಇನ್ನೆಷ್ಟು ದಿನ!
ಮನೆಯಂಗಳದಿ ರಾಶಿ ರಾಗಿಯ ಸುರಿದು
ಮನೆಯ ಸೂರಿಗೆಲ್ಲಾ ಭತ್ತದ ತೆನೆ ತೂಗಿ
ದವಸ ಧಾನ್ಯವ ಸೇರಲ್ಲಿ ಅಳೆದು
ದುಡಿದ ನನ್ನೆಲ್ಲಾ ಒಡಹುಟ್ಟಿದವರ ಹುಡಿಯ ತುಂಬಿ, ನನ್ನ ಸಂಸಾರಕಿಷ್ಟೆಂದು ಎತ್ತಿಟ್ಟು,
ಹಸಿದ ಹೊಟ್ಟೆಯ ರುಚಿ ರೈತ ನಾ ಅರಿತಿರುವೆ
ನೀಡಿ ಬಿಡುವೆನು, ಕೊಟ್ಟಷ್ಟು ಕೊಡಲಿ
ನನಗದೆ ಸಾಕೆಂದು ಭೂತಾಯಿಗೆ ನಮಿಸಿ
ಇನ್ನೆಷ್ಟು ದಿನ ಇನ್ನೆಷ್ಟು ದಿನ!
ದಿವ್ಯ ಭರತ್
ಮೈಸೂರು...